Reality vs Belief

ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ನಿಜವೇ?
ನಾವು ಏನು ದಾನ ಮಾಡುತ್ತೇವೆಯೋ ಅದರ ಎರಡು ಪಟ್ಟು ನಮಗೆ ಬರುತ್ತದೆ.
ಸತ್ಯವೆ?
ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ. ವಾಸ್ತವವೇ?
ನಾವು ಬದಲಾದರೆ ಜಗತ್ತೇ ಬದಲಾಗುತ್ತದೆ. ಇದು ಪ್ರಾಯೋಗಿಕವೇ?
ಇಂದಿನ ಎಲ್ಲಾ ಕಷ್ಟ ಸುಖಗಳಿಗೂ ಹಿಂದಿನ ಜನ್ಮದ ಪಾಪ ಪುಣ್ಯಗಳೇ ಕಾರಣ.ನಂಬಬಹುದೇ?
ಗಂಡು ಹೆಣ್ಣಿನ ಸಂಬಂಧ ಪೂರ್ವ ನಿಯೋಜಿತ ಋಣಾನುಬಂಧ. ಸರಿಯೇ?
ಗಂಡ ಹೆಂಡತಿ ಸಂಬಂಧ ಏಳು ಜನುಮಗಳ ಅನುಭಂದ. ಹೌದೇ?
ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ. ಗೊತ್ತೇ?
ಅಪಘಾತ,ಆಕಸ್ಮಿಕ, ಅನಾರೋಗ್ಯದ ಸಾವು ನಮ್ಮ ಹಣೆಬರಹ. ಒಪ್ಪೋಣವೇ?
ಬದುಕಿನ ಎಲ್ಲಾ ಘಟನೆಗಳೂ ಪೂರ್ವ ನಿರ್ಧಾರಿತ. ಪ್ರಶ್ನಿಸಬಾರದೇ?
ನನ್ನನ್ನು ಕಾಡುವ ಈ ಮನಸ್ಥಿತಿಗೆ ಸಮಾಧಾನಕರ ಉತ್ತರಬೇಕಿದೆ……………
ಹೊಟ್ಟೆ ತುಂಬಿದ ಶ್ರೀಮಂತರು,
ವೇದಾಧ್ಯಯನ ಪಂಡಿತರು,
ಬೈಬಲ್ ಪ್ರಚಾರಕರು,
ಖುರಾನ್ ಆರಾಧಕರು,
ವಿಭೂತಿ ಬಳಿದ ಮಠಾಧೀಶರು,
ಪುನರ್ಜನ್ಮ ಸೃಷ್ಟಿಕರ್ತರು,
ಜ್ಯೋತಿಷಿಗಳು,
ವಿಚಾರವಾದಿಗಳು,
ವಿಜ್ಞಾನಿಗಳ ಉತ್ತರಗಳು ನನಗೆ ಬೇಡ,
ಬೀದಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಉತ್ತರ ಬೇಕಿದೆ.
ಹುತಾತ್ಮ ಯೋಧನ ಹೆಂಡತಿಯಿಂದ ಉತ್ತರ ಬೇಕಿದೆ,
ಆತ್ಮಹತ್ಯೆ ಮಾಡಿಕೊಂಡ ರೈತನ ಮಗನಿಂದ ಉತ್ತರ ಬೇಕಿದೆ,
ಬಸ್ ಸ್ಟ್ಯಾಂಡಿನಲ್ಲಿ ದಿನ ಕಳೆಯುವ ಅನಾಥನಿಂದ ಉತ್ತರ ಬೇಕಿದೆ,
ಗಂಡನಿಂದಲೇ ಏಡ್ಸ್ ಬಂದು ಈಗ ಆತನಿಂದಲೇ ಪರಿತ್ಯಕ್ತಳಾದ ಮಹಿಳೆಯಿಂದ ಉತ್ತರ ಬೇಕಿದೆ,
ಮಾನವೀಯತೆಯಿಂದ ವಿಧುವೆಗೆ ಬದುಕು ನೀಡಿ ಈಗ ವರದಕ್ಷಿಣೆ ಆರೋಪದಲ್ಲಿ ಜೈಲಿನಲ್ಲಿ ದಿನದೂಡುತ್ತಿರುವ ಯುವಕನಿಂದ ಉತ್ತರ ಬೇಕಿದೆ,
ತನ್ನದೆಲ್ಲವನ್ನೂ ಗಲಭೆಯಲ್ಲಿ ಕಳೆದುಕೊಂಡ ವ್ಯಕ್ತಿಯ ಉತ್ತರ ಬೇಕಿದೆ,
ತಮ್ಮ ಸರ್ವಸ್ವವನ್ನೂ ತಮ್ಮ ನಾಲ್ಕು ಮಕ್ಕಳಿಗಾಗಿ ತ್ಯಾಗಮಾಡಿ ಈಗ ಅವರಿಂದ ತಿರಸ್ಕೃತರಾಗಿ ವೃಧ್ಧಾಶ್ರಮದಲ್ಲಿ ಬದುಕುತ್ತಿರುವ ತಂದೆಯ ಉತ್ತರ ಬೇಕಿದೆ,
ನಿವೃತ್ತಿ ವೇತನ ಪಡೆಯಲು 5 ವರ್ಷದಿಂದ ಭ್ರಷ್ಟ ಸರ್ಕಾರಿ ವ್ಯವಸ್ಥೆಯಲ್ಲಿ ನರಳುತ್ತಿರುವ ವೃಧ್ಧರಿಂದ ಉತ್ತರ ಬೇಕಿದೆ,
ಪ್ರಾಮಾಣಿಕರಾಗಿದ್ದುದರಿಂದಲೇ ತನ್ನ ಸಹಚರರಿಂದ ಕಿರುಕುಳಕ್ಕೊಳಗಾಗಿ ಸೇವೆಯಿಂದ ವಜಾಗೊಂಡ ಸರ್ಕಾರಿ ಅಧಿಕಾರಿಯಿಂದ ಉತ್ತರ ಬೇಕಿದೆ,
ಅವರ ಉತ್ತರಗಳು ಆಶಾದಾಯಕವಾಗಿದ್ದರೆ ಇವನ್ನೆಲ್ಲಾ ಮತ್ತೊಮ್ಮೆ ವಾಸ್ತವದ ವಿಮರ್ಶೆಗೊಳಪಡಿಸಬಹುದು.
ಇಲ್ಲದಿದ್ದರೆ ಇನ್ನೆಷ್ಟು ದಿನ ಈ ಭ್ರಮೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುವುದು.
ಅಥವಾ ಮೇಲೆ ಹೇಳಿದ ಎಲ್ಲವೂ ಸತ್ಯ. ನಿಮಗೆ ತಿಳಿವಳಿಕೆಯ ಕೊರತೆಯಿದೆ ಎನ್ನುವುದಾದರೆ ನಿಮಗೆ ಧನ್ಯವಾದಗಳು. ನಿಮ್ಮ ಅದೃಷ್ಟ ನಮಗಿಲ್ಲ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಗದ ಚಳವಳಿ.
◆ವಿವೇಕಾನಂದ. ಹೆಚ್.ಕೆ.◆

***** ***** ***** ***** *****

ಇದೇ ನನ್ನ ಉತ್ತರ👇
🔺ದೈವಜ್ಞ. ಹರೀಶ್ ಕಾಶ್ಯಪ 🔺

ಪುನರ್ಜನ್ಮ ಕರ್ತರು , ಶಾಸ್ತ್ರಗಳು , ತತ್ವಗಳು ಬೇಡ – ಅದೆಲ್ಲಾ ಸುಮ್ಮನೆ ಬುದ್ಧಿವಂತರ ವಂಚನೆ ಅಂತ ಜರೆದು , ವಿವೇಕಾನಂದ ” ಅಂತ ಹೆಸರು ಇಟ್ಟು ಕೊಂಡು ಕೇಳಿದರೆ ಯಾರೂ ಏನೂ ಉತ್ತರ ಕೊಡಲಾರರು.
ತತ್ವವೇತ್ತರ , ಜ್ಞಾನಿ ಸೂರಿಗಳ ಸರಾ ಸಗಟಾಗಿ ತಿರಸ್ಕಾರ ಮಾಡಿ , ಜಗದ ಅನ್ಯಾಯಗಳ ಪ್ರಶ್ನಿಸುವುದು ಜಿಜ್ಞಾಸೆ ಅನಿಸದು.
ಹತಾಶೆ ಆಗುವುದು.
ಇವರು ಹೇಳಿದ , ಹೇಳದ ಅನೇಕ ಅನ್ಯಾಯಗಳ ಹೂರಣವೇ ಜೀವ ಜಗತ್ ಇರುವುದು , ಅನಾದಿಯಿಂದ.
ಹಿರಣ್ಯಾಕ್ಷ ಇದ್ದ ಕಾಲದಲ್ಲಿ ಪ್ರಹ್ಲಾದ ಹೋರಾಡಿದ , ಬಾಲಕ ! ಗೆದ್ದ !
ದೇವರು ಗೆಲಿಸಿದ.
ಅಂದೂ ಪ್ರಹ್ಲಾದ ಈ
ವಿವೇಕಾನಂದ. ಹಚ್. ಕೆ ಯಂತೆ ದೇವರು , ಗುರುತತ್ವ , ಶಾಸ್ತ್ರಾರ್ಥ ಪರಂಪರೆಯನ್ನು ಜರೆದು , ನ್ಯಾಯ ಕೇಳಿದನೆ??
ಅಸತ್ ಇನ ವಿರುದ್ಧ ದೈವ ಕರ್ಮ ಧರ್ಮಗಳ ನಂಬಿ , ಹೋರಾಡಿದ !
ಗೆದ್ದ. ಅಪ್ರತಿಮ ಸಾಹಸಿಯಾದ. 14 ಸಹಸ್ರ ವರ್ಷಗಳ ಈ ಭುವಿಯನ್ನು ಧರ್ಮದಿಂದ ಆಳಿದ…ವಿರೋಚನ ಬಲಿಯಂಥ ಮಹಾ ಧರ್ಮ ಭೀರುಗಳ ಜಗಕೆ ಕೊಟ್ಟ ಮಕ್ಕಳಾಗಿ !!
ಈ ವಿದೂಷಕರಿಗೆ ಈ ಸಾಮರ್ಥ್ಯ ಇದೆಯೇ???
ಹಾಗೆಯೇ , ಕುಂತಿ ಪಾಂಡವರು , ದ್ರೌಪದಿ , ಭೀಷ್ಮ , ವಿದುರ , ಸಂಜಯ , ಉದ್ಧವ , ರಾಮಾಯಣದ ಸಸಹೋದರ ಸಹಿತ ಸೀತೆ , ಅಂಬಿಗರು , ಬಿಲ್ಲವರು , ಕಪಿಗಳು , ಜಟಾಯು ಜಾಮ್ಬವಂತ ವನ ಗಗನಚಾರಿಗಳು , ಲಂಕೆಯ ವಿಭೀಷಣ ಇತ್ಯಾದಿ ಅನೇಕಾನೇಕ ಜನರೂ ಸಹ ಈ ಮೇಲೆ ಹೇಳಿಹ ಸಾಮಾಜಿಕ , ಕೌಟುಂಬಿಕ ಮತ್ತು ಆತ್ಮೀಕ ಅತ್ಯಾಚಾರಗಳಿಗೆ ಸಾಕ್ಷಿಯಾಗಿ , ಅದನ್ನು ಮೀರಿ ಹೋರಿ , ಮಹಾತ್ಯಾಗ ಪರಿಶ್ರಮದಿಂದ ಅಧರ್ಮವ ಸೋಲಿಸಿದ ಅಪ್ರತಿಮ ಜೀವರು !
ಹಾಗೆಯೇ ಅಂಗ್ರೇಜರ , ತುರುಕರ ಹೇಯ ದಬ್ಬಾಳಿಕೆಗೆ ಮೈ ಮನ ಪ್ರಾಣ , ತಮ್ಮ ಕುಟುಂಬವನ್ನೇ ಬಲಿ ಕೊಟ್ಟು , ಅನ್ಯಾಯದ ವಿರುದ್ಧ ಹೋರಿದ , ಸ್ವಾತಂತ್ರ ವೀರರು…ಕೊನೆಗೆ
ಯಶ ಪಡೆದರು !!
ಗಾಂಧಿ ಮತ್ತು ಪರಿವಾರದ ದಬ್ಬಾಳಿಕೆ ಹುನ್ನಾರದಿಂದ ಪುನಃ ಜನ ಅದೆಲ್ಲಾ ಮರೆತರು !!
ಪುನಃ ಅನ್ಯಾಯ ಅತ್ಯಾಚಾರ ಗರಿಮೆಯಲ್ಲಿದೆ. ಯಾರು ಹೊಣೆ??
ತತ್ವ ಶಾಸ್ತ್ರವೇ? ಧರ್ಮಜ್ಞರೇ? ದೇವರೇ? ಜನ್ಮಾಂತರವೇ??
ಇದೆಲ್ಲಾ ಬಾಲಿಶ ಪ್ರಶ್ನೆಗೆ ನಾವು ಉತ್ತರ ಕೊಡುವುದಿಲ್ಲ.
ಆದರೆ ಈ ಇಂಥ ಹೆಡ್ಡ ಲೇಖನಗಳು ಬಹಳ ಬುದ್ಧಿವಂತರಿಂದ ಬಂದಿದೆ ಎಂಬ “ಅತ್ಯಾಚಾರ” ತಡೆಯಲು ಈ ಉತ್ತರವಷ್ಟೇ !
HK ವಿವೇಕಾನಂದ ಅವರು ಅಷ್ಟು ಬೇಗುದಿಯಲ್ಲಿ ಇದ್ದರೆ , ಈ ಮೇಲೆ ಹೇಳಿದಂಥ ಅನಂತ ಮಹಾತ್ಮ ಜೀವರಂತೆ ಹೋರಾಡಿ ಬೀದಿಗಿಳಿದು ಕಾದಲಿ , ನಾವೂ ಬರುವೆವು…ನಿಸ್ಸಂದೇಹವಾಗಿ !
ಅದು ಬಿಟ್ಟು , ಸಮಾಜದ ವಿಪರೀತವ ತತ್ವಶಾಸ್ತ್ರವನ್ನು ಗುರಿ ಮಾಡಿ ಹೀಯಾಳಿ ಜರೆವುದ ಸಹಿಸಲಾರೆ.
ನಿಶ್ಚಿತ.
ಇನ್ನು ಈ ಇಂಥ ಅವರ ಮೆಸೇಜ್ಗಳ
ನೀವು ಸುಮ್ಮನೆ ಹೀಗೆ ಹಾರಲು ಬಿಡುವಿರಿ , ನಿಮಗೇ ಚಿಂತನೆಯಿಲ್ಲ…ಅಂಥವರಿಗೂ ಇಲ್ಲ !!
ನೀವೆಲ್ಲಾ ಸೇರಿ ಅಂತೂ ತತ್ವಗಳನ್ನು ಗಾಳಿಗೆ ತೂರಲು ಸಿದ್ಧರಿರುವಿರಿ !
ಹಾಗಾಗದಿರಲಿ ಅಂತ ಈ ಉತ್ತರ ಕೊಟ್ಟಿಹೆ.
ನಿಮಗೇನಾದರೂ ಈ ನನ್ನ ಉತ್ತರ ಜಿಜ್ಞಾಸೆಗೆ ದೂಡಿದ್ದರೆ , ಖಂಡಿತಾ ಇದನ್ನು ಅದೇ ಲಗಾಯಿತಿಯಿಂದ ಎಲ್ಲರಿಗೆ ಕಳಿಸುವಿರಿ , ಮತ್ತು ಯೋಚನೆ ಮಾಡುವಿರಿ ಸೀರಿಯಸ್ ಆಗಿ ಅಂತ
ಆಶಯ ನನ್ನದು.
ಇನ್ನು ನಿಮಗೆ ಬಿಟ್ಟಿದ್ದು.
ಹಾ ! ವಿವೇಕಾನಂದHK ಅವರ ಕಳಕಳಿ ಒಳ್ಳೆದೇ , ಮೆಚ್ಚುವೆ. ಹಾಗಂತ ನಾ ಏನ ಹೇಳಿಹೆನೋ ಅದ ಮೀರಿದ ಮೆಚ್ಚು ಅವರ ವಿಚಾರವಲ್ಲ ☝
ಧನ್ಯವಾದ.

Advertisements